ಸುಗ್ಗಿ ಮಾಡೋಣು ಬಾರವ್ವಾ
ಶಿಶುನಾಳ ಶರೀಫ
ಸುಗ್ಗಿ ಮಾಡೋಣು ಬಾರವ್ವಾ, ಗೆಳತಿ
ಸುಮ್ಮನ್ಯಾಕ ಕುಳತಿ
ಅಗ್ಗದ ಫಲಗಳ ಕೊಯ್ಯಲಿಕ್ಕೆ ಹೊಲದೊಳು
ಒಗ್ಗಿಲಿ ಕರೆದರೆ ಹಿಗ್ಗಿಲಿ ಹೋಗಿ
ಹೊಲದವರ ಕರೆದರೆ ಹೊಗಲಿಬೇಕು
ನೆಲೆಯನು ತಿಳಿಯಬೇಕು
ಕುಲದವರೊಂದು ಸಲಗಿಯು ಸಾಕು
ಬಲು ಜೋಕಿರಬೇಕು
ಹೊಲದೊಳು ಬೆಳೆದಿಹ ಹುಳ್ಳಿ ಮಿಕ್ಕಿ ಕಸ
ತಳದ ಕೋಲಿಯ ದಾಟಿ ಕೊಯ್ಯೋಣ ಗೆಳತಿ ||
ಏಳೆಂಟು ಅಕ್ಕಡಿಯ ಏಣಿಸಿ ನಮ್ಮ
ಬಾಳನು ಅದರೊಳು ದಣಿಸಿ
ಕಾಳಕೂಟ ವಿಷ ಎಣಿಸಿ ನಂಟಿನ
ಸೋಲಗಳೆಲ್ಲವ ಗಣಿಸಿ
ಬಾಳಿನ ರಾಗಿ ನವಣೆ ಸಜ್ಜೆಯ
ಓಲ್ಯಾಡುತ ಬಹುರಾಗದಿ ಕೊಯ್ಯುತ ||
ಶಿಶುನಾಳಧೀಶನೆ ಗುರುವು ಅವ
ಕರೆದಲ್ಲಿ ಹೋಗೋದು ತರವು
ಕಸವ ಕಳೆದು ಕೈ ಕುಡುಗೋಲ ಹಿಡಿಯುತ
ಹಸನಾಗಿ ಹಲವೆಡೆ ಹರಿವ ಮನವ ಸುಟ್ಟು ||